1924 -. ಭಾರತದ ಶ್ರೇಷ್ಠ ವ್ಯಂಗ್ಯ ಚಿತ್ರಕಾರರು. ರಾಶಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ ಇವರ ಪೂರ್ಣ ಹೆಸರು.  ಮೂಲತಃ  ಕನ್ನಡಿಗರಾದ ಲಕ್ಷ್ಮಣ್ 1924 ನವೆಂಬರ್ 24ರಂದು ಜನಿಸಿದರು. ತಂದೆ ಕೃಷ್ಣಸ್ವಾಮಿ, ಪ್ರೌಢಶಾಲೆಯೊಂದರ ಮುಖ್ಯೋಪಾಧ್ಯಾಯರಾಗಿದ್ದರು. ಭಾರತೀಯ ಇಂಗ್ಲಿಷ್‍ನ ಪ್ರಮುಖ ಲೇಖಕರಾದ ಆರ್. ಕೆ. ನಾರಾಯಣ್. ಇವರ ಹಿರಿಯ ಸಹೋದರ.

(ನೋಡಿ- ನಾರಾಯಣ್-ಆರ್-ಕೆ) 

ಲಕ್ಷ್ಮಣ್‍ರಿಗೆ ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ. ಸಣ್ಣ ಹುಡುಗನ ಕೈಯಲ್ಲಿ ಯಾವಾಗಲೂ ಒಂದು ಪುಸ್ತಕ ಮತ್ತು ಲೇಖನಿ. ನೆಲದ ಮೇಲೆ ಹೆಚ್ಚಾಗಿ ರೇಖಾಚಿತ್ರಗಳನ್ನು ಬಿಡಿಸುವ ಚಟ ಇವರದು. ಸಣ್ಣ ಹುಡುಗನಾಗಿ ಮನೆಯಲ್ಲಿಯ ಇತರ ಮಕ್ಕಳ ಹಾಗೂ ತಂದೆ, ತಾಯಿ ಮತ್ತು ಅಣ್ಣಂದಿರ ರೇಖಾಚಿತ್ರಗಳನ್ನು ಬಿಡಿಸುವುದು ಇವರ ಹವ್ಯಾಸವಾಗಿತ್ತು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಫೇಲಾದರು. ಚಿತ್ರಕಲೆಯಲ್ಲಿಯ ಆಸಕ್ತಿಯಿಂದಾಗಿ ಮುಂಬಯಿನ ಜೆ.ಜೆ. ಕಲಾಶಾಲೆಯಲ್ಲಿ ಚಿತ್ರಕಲೆ ಕಲಿಯಬೇಕೆಂಬ ಹೆಬ್ಬಯಕೆ ಇವರದಾಗಿತ್ತು. ಆದರೆ ಇವರಿಗೆ ಅಲ್ಲಿ ಪ್ರವೇಶ ಸಿಗಲಿಲ್ಲ. ಮೈಸೂರಿನ ಮಹಾರಾಜ ಕಾಲೇಜು ಸೇರಿ ಬಿ.ಎ. ಪದವಿ ಪಡೆದರು. ಆದರೆ ಮುಂದೊಂದು ದಿನ ಜೆ.ಜೆ. ಕಲಾಶಾಲೆಯವರು  ಇವರನ್ನು ತಮ್ಮ ಶಾಲಾವಾರ್ಷಿಕೋತ್ಸವಕ್ಕೆ ಕರೆಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿಸಿದ ಘಟನೆ ನಡೆದದ್ದು ಗಮನಾರ್ಹ ಸಂಗತಿಯಾಗಿದೆ. 
ವಿದ್ಯಾರ್ಥಿಯಾಗಿರುವಾಗಲೇ ಚಿತ್ರಕಾರರೆಂದು ಪ್ರಸಿದ್ಧಿಗೆ ಬಂದ  ಇವರು ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ಪ್ರಾರಂಭದಲ್ಲಿ ವ್ಯಂಗ್ಯಚಿತ್ರಗಳನ್ನು ಬಿಡಿಸಿದರು. ಚಿಕ್ಕ ವಯಸ್ಸಿನಲ್ಲೆ ಇವರು ಶ್ರೇಷ್ಠ ವ್ಯಂಗ್ಯಚಿತ್ರಕಾರ ಡೇವಿಡ್ ಲೋ ಅವರ ವ್ಯಂಗ್ಯಚಿತ್ರಗಳಿಂದ ಬಹಳ ಪ್ರಭಾವಿತರಾದರು. ಇವರನ್ನು ವ್ಯಂಗ್ಯ ಚಿತ್ರಕಾರನನ್ನಾಗಿ ಬೆಳಕಿಗೆ ತಂದ ಕೀರ್ತಿ ಕೊರವಂಜಿ ಪತ್ರಿಕೆಯ ರಾ. ಶಿ. ಅವರಿಗೆ ಸಲ್ಲುತ್ತದೆ. ಕೊರವಂಜಿ ಪತ್ರಿಕೆ ಇವರ ಪ್ರತಿಭೆಯ ವಿಕಸನಕ್ಕೆ ಹಾದಿಮಾಡಿಕೊಟ್ಟಿತು.

ಕೆಲಕಾಲ ಇವರು ಮದರಾಸಿನ ಜೆಮಿನಿ ಸ್ಟೂಡಿಯೋದಲ್ಲಿ ಕಲಾವಿದರಾಗಿ ದುಡಿದರು. ಅನಂತರ ಕೆಲಸ ಹುಡುಕಿಕೊಂಡು 1947ರಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದರು. ಅಲ್ಲಿಂದ ಮುಂಬಯಿಗೆ ಹೋದರು. 1947ರಲ್ಲಿ ಫ್ರೀ ಪ್ರೆಸ್ ಜರ್ನಲ್ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರರಾಗಿ ಸೇರಿದರು. ಆರು ತಿಂಗಳ ಕಾಲ ಅಲ್ಲಿ ಕೆಲಸ ಮಾಡಿ ಕಾರಣಾಂತರದಿಂದ ಅದನ್ನು ತೊರೆದು ‘ಟೈಮ್ಸ್ ಆಫ್ ಇಂಡಿಯ ಪತ್ರಿಕೆಯನ್ನು ಸೇರಿದರು. ಇವರು ಈ ಪತ್ರಿಕೆಗೆ ಸೇರುವವರೆಗೆ ಅದರಲ್ಲಿ ವ್ಯಂಗ್ಯ ಚಿತ್ರಗಳು ಪ್ರತಿದಿನವೂ ಪ್ರಕಟವಾಗುತ್ತಿರಲಿಲ್ಲವೆಂಬುದು ಗಮನಾರ್ಹ. ‘ಟೈಮ್ಸ್ ಆಫ್ ಇಂಡಿಯ’ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಗಳನ್ನು ಪ್ರಥಮವಾಗಿ ಪ್ರಾರಂಭಸಿದ ಕೀರ್ತಿ ಲಕ್ಷ್ಮಣ್ ಅವರಿಗೆ ಸಲ್ಲುತ್ತದೆ. ಪ್ರಾರಂಭದಲ್ಲಿ ರೇಖಾಚಿತ್ರಗಳನ್ನು ಬಿಡಿಸುತಿದ್ದ ಇವರು ಮುಂದೆ ವ್ಯಂಗ್ಯಚಿತ್ರಕಾರರಾಗಿ ಬೆಳಕಿಗೆ ಬಂದರು. ಟೈಮ್ಸ್ ಆಫ್ ಇಂಡಿಯ ಪತ್ರಿಕೆಯಲ್ಲಿ ಯೂ ಸೆಡ್ ಇಟ್ ಎಂಬ ಜನಪ್ರಿಯ ತಲೆಬರೆಹದ ಅಡಿ ಅಚ್ಚಾಗುವ ಇವರ ದೈನಿಕ  ವ್ಯಂಗ್ಯಚಿತ್ರಗಳು ರಾಜಕೀಯ ರಂಗದಲ್ಲಿ ಸ್ಥಿರತೆ, ಅಸ್ಥಿರತೆಯನ್ನು ಸೂಚಿಸುವಂಥವಾಗಿವೆ. ಇವರು ಸಾವಿರಾರು ಸಾಮಾಜಿಕ-ರಾಜಕೀಯ ವ್ಯಂಗ್ಯಚಿತ್ರಗಳನ್ನು ಬಿಡಿಸಿದ್ದಾರೆ. 

ಇವರ ಪ್ರತಿಭೆಗೆ ಸಂದ ಪುರಸ್ಕಾರಗಳು ಅನೇಕ. 1958ರಲ್ಲಿ ಲಂಡನ್ನಿನಲ್ಲಿ ನಡೆದ ಅಂತಾರಾಷ್ಟ್ರೀಯ ವ್ಯಂಗ್ಯಚಿತ್ರಗಳ ಪ್ರದರ್ಶನದಲ್ಲಿ ಭಾರತದಿಂದ ಮೊತ್ತ ಮೊದಲ ಬಾರಿಗೆ ಲಕ್ಷ್ಮಣ್‍ರ ಚಿತ್ರಗಳನ್ನು ಪ್ರದರ್ಶಿಸಲಾಯಿತು. 1969ರಲ್ಲಿ ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಸೇವೆಗಾಗಿ ಬಿ.ಜಿ. ಹಾರ್ನಿಮನ್‍ರ ಶ್ರೇಷ್ಠ ಪತ್ರಿಕೋದ್ಯಮಿ ಎಂಬ ಪ್ರಶಸ್ತಿಯನ್ನು ನೀಡಲಾಯಿತು. 1971ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. 1974ರಲ್ಲಿ ದುರ್ಗಾರತನ್ ಪ್ರಶಸ್ತಿ ಪಡೆದರು. ಮರಾಠವಾಡ ವಿಶ್ವವಿದ್ಯಾಲಯ ಗೌರವ ಡಿ.ಲಿಟ್ ಪದವಿ (1979) ನೀಡಿ ಗೌರವಿಸಿದೆ. ಇವರಿಗೆ ಕರ್ನಾಟಕ ಸರ್ಕಾರ 1983ರಲ್ಲಿ ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಸೇವೆಗಾಗಿ ಪ್ರಶಸ್ತಿ ನೀಡಿದೆ. 1984ರಲ್ಲಿ ಇವರಿಗೆ ಮ್ಯಾಗ್ಸೆಸೇ ಪ್ರಶಸ್ತಿ ದೊರಕಿತು. ಇಂಡಿಯನ್ ಎಕ್ಸ್‍ಪ್ರೆಸ್ ಬಳಗದ ಬಿ.ಡಿ. ಗೊಯೆಂಕಾ ಪ್ರಶಸ್ತಿಯೂ ಇವರಿಗೆ ಲಭಿಸಿದೆ.
 
ಪ್ರಪಂಚದ ಗಣ್ಯವ್ಯಕ್ತಿಗಳನ್ನು ಭೇಟಿ ಮಾಡಿದಾಗಲೆಲ್ಲ ಅವರ ವ್ಯಂಗ್ಯ ಚಿತ್ರವನ್ನು ಬಿಡಿಸಿ ಅದರ ಮೇಲೆ ಅವರ ಹಸ್ತಾಕ್ಷರ ಪಡೆಯುವುದು ಇವರ ಪ್ರಮುಖ ಹವ್ಯಾಸಗಳಲ್ಲೊಂದು. 
ಅಣ್ಣ ಆರ್.ಕೆ. ನಾರಾಯಣ್‍ರ ಅನೇಕ ಪುಸ್ತಕಗಳಿಗೆ ರೇಖಾಚಿತ್ರಗಳನ್ನು ಇವರು ಬಿಡಿಸಿದ್ದಾರೆ. ಕೇವಲ ವ್ಯಂಗ್ಯಚಿತ್ರಗಳಲ್ಲದೇ ಚಿತ್ರಕಲೆಯಲ್ಲೂ ಇವರು ಅಪಾರ ಪರಿಣತಿಯನ್ನು  ಹೊಂದಿದ್ದಾರೆ. ಪ್ರಾಣಿಪಕ್ಷಿಗಳ, ವಸ್ತುಗಳ ಅನೇಕ ವರ್ಣಚಿತ್ರಗಳನ್ನು ರಚಿಸಿದ್ದಾರೆ. ಲಕ್ಷ್ಮಣ್‍ರ ವ್ಯಂಗ್ಯಚಿತ್ರಗಳು ‘ಮಿ. ಅ್ಯಂಡ್ ಮಿಸಸ್’ 55 ನಂಥ ಹಿಂದೀ ಸಿನಿಮಾದಲ್ಲೂ ಕಾಣಿಸಿಕೊಂಡಿವೆ. 

ಉತ್ತಮ ಬರೆಹಗಾರರೂ ಆಗಿರುವ ಇವರು ಡೂಡಲ್ಸ್, ಸಾರಿ ನೋ ರೂಮ್ ಎಂಬ ಕೃತಿಗಳನ್ನು ರಚಿಸಿದ್ದಾರೆ. ಪ್ರವಾಸಕಥನ ಹಾಗೂ ಸಣ್ಣಕಥೆಗಳನ್ನೂ ರಚಿಸಿದ್ದಾರೆ.
	
(ಎನ್.ಯು.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ